ಜೈವಿಕ ಪ್ರಮಾಣ ನಿಷ್ಕರ್ಷೆ
	ಜೈವಿಕ ಪ್ರಕ್ರಿಯೆಗಳನ್ನು ಉಪಯೋಗಿಸಿಕೊಂಡು ಜೈವಿಕ ವಸ್ತುಗಳ ಪರಿಮಾಣಗಳನ್ನು ಮಾಪಿಸುವ ತಂತ್ರ (ಬಯೋ ಅಸೇ). ಜೀವಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಅನೇಕ ರೀತಿಯ ರಾಸಾಯನಿಕ ಕ್ರಿಯೆಗಳು ಅದರ ಶರೀರದಲ್ಲಿ ಸತತವಾಗಿ ನಡೆಯುತ್ತಿರಲೇಬೇಕು. ಈ ಕ್ರಿಯೆಗಳಿಗೆ ಅದರ ಶರೀರದಲ್ಲೇ ರಚನೆಯಾದ ಕಿಣ್ವಗಳು ಆಧಾರ. ಅವುಗಳ ರಚನೆಗೆ ಹಲವಾರು ವಸ್ತುಗಳು ದೇಹಕ್ಕೆ ಸೇರಬೇಕು. ಇವುಗಳಲ್ಲಿ ಅತಿ ಮುಖ್ಯವಾದವು ಜೀವಸತ್ತ್ವಗಳು ಮತ್ತು ಅಮೈನೋ ಆಮ್ಲಗಳು. ಪ್ರತಿಯೊಂದು ಜೀವಿಯ ದೇಹಕ್ಕೂ ಇವು ಸೇರಲೇಬೇಕಾದ ಪ್ರಮಾಣಕ್ಕಿಂತ ಕಡಿಮೆ ಸೇರ್ಪಡೆಯಾದರೆ ಆ ಜೀವಿಯ ಬೆಳೆವಣಿಗೆ ಕುಂಠಿತವಾಗುತ್ತದೆ. ಅಂಥ ಸ್ಥಿತಿಯಲ್ಲಿ ಸ್ವಲ್ಪ ಸ್ವಲ್ಪವಾಗಿ ಏರುತ್ತಿರುವ ಕ್ರಮದಲ್ಲಿ ಕೊರತೆ ಬಿದ್ದ ವಸ್ತುವನ್ನು ಕೊಟ್ಟರೆ ಅದರ ಬೆಳೆವಣಿಗೆ ಸರಿಯಾದ ಪರಿಮಿತಿಯನ್ನು ಮುಟ್ಟುವ ತನಕವೂ ಹೆಚ್ಚುವುದು. ಆ ಪರಿಮಿತಿಯನ್ನು ಮುಟ್ಟಿದ ಬಳಿಕ ಅಗತ್ಯ ಅಂಶಗಳನ್ನು ಎಷ್ಟು ಹೆಚ್ಚಿಸಿದರೂ ಜೀವಿಯ ಬೆಳವಣಿಗೆ ವೃದ್ಧಿಯಾಗಲಾರದು. ಅಂದರೆ ಅದರ ದೇಹವನ್ನು ಸೇರಿರುವ ಜೀವಸತ್ತ್ವದ ಅಥವಾ ಅಮೈನೋ ಆಮ್ಲಗಳ ಮತ್ತು ಜೀವನಿರೋಧ ವಸ್ತುಗಳ ಪ್ರಮಾಣವನ್ನು ಕಂಡುಹಿಡಿಯಲು ಈ ಪ್ರಯೋಗವನ್ನು ಬಳಸುವುದುಂಟು.

ಜೀವಮಾಪನಕ್ಕೆ ಪ್ರಾಣಿಗಳನ್ನಾಗಲೀ ಅಣುಜೀವಿಗಳನ್ನಾಗಲೀ ಉಪಯೋಗಿಸುತ್ತಾರೆ. ಈ ಕ್ರಮಕ್ಕೆ ಹೆಚ್ಚು ರೂಢಿಯಲ್ಲಿರುವ ಪ್ರಾಣಿಗಳೆಂದರೆ ಬಿಳಿ ಇಲಿಗಳು, ಗಿನಿಪಿಗ್ ಮತ್ತು ಕೋಳಿ ಮರಿಗಳೂ. ವಿಶೇಷ ರೀತಿಯ ಮಾಪನಕ್ಕೆ ಕೀಟಗಳನ್ನೂ ಮೀನುಗಳನ್ನೂ ಕುರಿ, ಹಂದಿ ಮತ್ತು ಕೋತಿಗಳನ್ನೂ ಬಳಸುವುದುಂಟು. ಈ ಪ್ರಯೋಗಗಳ ಮೂಲಕ್ರಮವೆಂದರೆ, ಮೊದಲು ಅಳೆಯಬೇಕಾದ ಜೀವಸತ್ತ್ವದ ಅಥವಾ ಅಮೈನೋ ಆಮ್ಲದ ಕೊರತೆ ಮಾತ್ರ ಇದ್ದು ಮಿಕ್ಕೆಲ್ಲ ರೀತಿಯಲ್ಲೂ ಪರಿಪೂರ್ಣವಾದ ಮೂಲ ಆಹಾರವನ್ನು ತಯರಿಸುವುದು. ಮಾಪನಕ್ಕೆ ಸೂಕ್ತವಾದ ಪ್ರಾಣಿಗಳನ್ನು ಎರಡು ಭಾಗಗಳಾಗಿ ವಿಂಗಡಿಸಿ ಮೊದಲನೆಯ ಭಾಗದ ಪ್ರಾಣಿಗಳಿಗೆ ಏರು ಕ್ರಮದಲ್ಲಿ ಹೆಚ್ಚಿಸಿ ಶುದ್ಧವಾದ ಮಾಪಕಾಂಶವನ್ನು ಕೊಡುವುದು. ಎರಡನೆಯ ಭಾಗದ ಪ್ರಾಣಿಗಳಿಗೆ ಅದೇ ಏರು ಕ್ರಮದಲ್ಲಿ ಮಾಪಕವಸ್ತುವನ್ನು ಒಳಗೊಂಡಿರುವ ಪದಾರ್ಥವನ್ನು ಮೂಲ ಆಹಾರದ ಜೊತೆ ಸೇರಿಸಿ ಕೊಡುವುದು. 20 ರಿಂದ 60ರಷ್ಟು ದಿವಸಗಳು ಕಳೆದ ಬಳಿಕ ಎರಡೂ ಭಾಗದ ಪ್ರಾಣಿಗಳ ತೂಕವನ್ನು ಗುರುತಿಸುವುದು. ಮೊದಲನೆಯ ಭಾಗದ ಪ್ರಾಣಿಗಳಿಂದ ದೊರೆತ ವೃತ್ತಾಂತಗಳ ಆಧಾರದ ಮೇಲೆ ಮಾಪಕಾಂಶದ ಪ್ರಮಾಣ ಮತ್ತು ಪ್ರಾಣಿಗಳ ತೂಕದ ಸಂಬಂಧವನ್ನು ಸೂಚಿಸುವ ಒಂದು ಗ್ರಾಫ್ ಎಳೆಯುವುದು. ಈ ಗ್ರಾಫಿನಿಂದ ಎರಡನೆಯ ವಿಭಾಗದ ಪ್ರಾಣಿಗಳ ತೂಕಗಳನ್ನು ಅರಿತು ಅವುಗಳ ದೇಹಕ್ಕೆ ಸೇರಿದ ಮಾಪಕಾಂಶದ ಪ್ರಮಾಣವನ್ನು ಕಂಡುಹಿಡಿಯಬಹುದು. ಜೀವಿಗೆ ಉಪಯುಕ್ತವಾದ ಜೀವಸತ್ತ್ವಗಳ ಮಾಪನವನ್ನು ಮಾಡಲು 1940ರ ವರೆಗೂ ಇದ್ದ ಸೂಕ್ತಕ್ರಮ ಇದೊಂದೇ ಆಗಿತ್ತು.

ಅಣುಜೀವಿಗಳಿಗೂ ಪ್ರಾಣಿಗಳಂತೆಯೇ ಜೀವಸತ್ತ್ವಗಳೂ ಆಮೈನೋ ಆಮ್ಲಗಳೂ ಅತ್ಯಗತ್ಯ ಎಂಬ ಅಂಶ ಹೊರಬಿದ್ದ ಬಳಿಕ ಅಣುಜೀವಿಗಳನ್ನು ಉಪಯೋಗಿಸಿ ಜೀವಮಾಪನ ಮಾಡುವ ಪದ್ಧತಿ ಆರಂಭವಾಗಬೇಕಾಯಿತು. ಹಲವಾರು ಅಣುಜೀವಿಗಳು ತಮಗೆ ಅಗತ್ಯವಾದ ಜೀವಸತ್ತ್ವಗಳನ್ನೂ ಅಮೈನೋ ಆಮ್ಲಗಳನ್ನು ಸ್ವತಃ ರಚಿಸಬಲ್ಲವಾದ್ದರಿಂದ ಅವುಗಳಿಗೆ ಕೊಡುವ ಆಹಾರದಲ್ಲಿ ಈ ಅಂಶಗಳು ಇರಬೇಕಾದ ಆವಶ್ಯಕತೆ ಇಲ್ಲ. ಆದರೆ ಈ ಕೆಲವು ಅಣುಜೀವಿಗಳಿಗೆ ಈ ಸಾಮಥ್ರ್ಯ ಇಲ್ಲದಿರುವುದರಿಂದ, ರಚನೆಯಾಗದ ಅಗತ್ಯ ಅಂಶಗಳನ್ನು ಆಹಾರದಲ್ಲಿ ಸೇರಿಸಬೇಕು. ಇಂಥ ಅಣುಜೀವಿಗಳೇ ಮಾಪನಕ್ಕೆ ಸೂಕ್ತವಾದವು. ಇಲ್ಲಿ ಅನುಸರಿಸಬೆಕಾದ ಕ್ರಮವೂ ಪ್ರಾಣಿಗಳಿಗೆ ವಿವರಿಸಿದ ಕ್ರಮದಂತೆಯೇ ಇದೆ. ಆದರೆ ಅಣುಜೀವಿಗಳ ಕ್ರಮಕ್ಕೆ ತಗಲುವ ವೆಚ್ಚ ಬಲು ಕಡಿಮೆ. ಇದೇ ಹೆಚ್ಚು ರೂಢಿಯಲ್ಲಿರುವುದಕ್ಕೆ ಇದೊಂದು ಮುಖ್ಯವಾದ ಕಾರಣ. ಈ ಕ್ರಮದಲ್ಲಿ ಬೆಳೆವಣಿಗೆಯನ್ನು ತೂಕದಿಂದ ತಿಳಿಯುವ ಬದಲು ಅವುಗಳ ಸಂಖ್ಯೆ ಅಥವಾ ಅವುಗಳಿಂದ ಉತ್ಪತ್ತಿಯಾಗುವ ಆಮ್ಲಗಳು, ಅನಿಲಗಳು ಮತ್ತು ಇತರ ರಾಸಾಯನಿಕ ವಸ್ತುಗಳ ಪ್ರಮಾಣವನ್ನು ಕಂಡುಹಿಡಿಯುವುದರಿಂದ ಅಳೆಯಬಹುದು. ಈ ಕ್ರಮದಲ್ಲಿ ಸಹ ಗ್ರಾಫ್ ಮೂಲಕ ಜೀವಸತ್ತ್ವದ ಪ್ರಮಾಣ ಮತ್ತು ವೃದ್ಧಿಯ ಸಂಬಂಧವನ್ನು ರಚಿಸಿ ವೃದ್ಧಿಯನ್ನು ಮೇಲೆ ಹೇಳಿದ ರೀತಿಯಲ್ಲಿ ಅಳೆದು ಮಾಪಕಾಂಶದ ಪ್ರಮಾಣವನ್ನು ಶೋಧಿಸಬಹುದು.

ಅತಿ ಹೆಚ್ಚಿನ ರೂಢಿಯಲ್ಲಿರುವ ಮತ್ತೊಂದು ಜೀವಮಾಪನ ಪದ್ಧತಿಯೆಂದರೆ ಪ್ರತಿಜೈವಿಕಗಳನ್ನು (ಆ್ಯಂಟಿ ಬಯೊಟಿಕ್ಸ್) ಅಳೆಯುವ ಕ್ರಮ. ಅಣುಜೀವಿಯ ವೃದ್ಧಿ ಎಷ್ಟರ ಮಟ್ಟಿಗೆ ತಡೆಯಾಗಿದೆ ಎಂದು ತಿಳಿಯುವುದೇ ಇದಕ್ಕೆ ಅಳತೆಗೋಲು. ಇದರ ಕ್ರಮ, ಪ್ರಾಣಿ ಅಥವಾ ಅಣುಜೀವಿಗಳಿಂದ ರೂಪಿತವಾಗಿರುವ ಕ್ರಮಕ್ಕಿಂತ ಭಿನ್ನವಾಗಿದೆ. ಈ ಕ್ರಮದಲ್ಲಿ ಎಲ್ಲ ರೀತಿಯಲ್ಲಿಯೂ ಪರಿಪೂರ್ಣವಾದ ಆಹಾರವನ್ನು ಒಳಗೊಂಡ, ಕಾಸಿದರೆ ದ್ರವವಾಗುವ ತಣ್ಣಗಾದರೆ ಗಟ್ಟಿಯಾಗುವ ಅಗಾರ್ ಅಗಾರ್ ಎಂಬ ರಾಸಾಯನಿಕ ವಸ್ತುವನ್ನು ಉಪಯೋಗಿಸುತ್ತಾರೆ. ಮೊದಲು ಅಗಾರ್ ಅಗಾರನ್ನು ಕಾಯಿಸಿ ಗಾಜಿನ ತಟ್ಟೆಗೆ ಹಾಕಿ ಅದಕ್ಕಿಂತ ಸ್ವಲ್ಪ ದೊಡ್ಡ ವ್ಯಾಸವುಳ್ಳ ಮತ್ತೊಂದು ಗಾಜಿನ ತಟ್ಟೆಯನ್ನು ಹೊದಿಕೆಯಾಗಿ ಮುಚ್ಚುವುದು. ತರುವಾಯ ಅಣುಜೀವಿಯನ್ನು ಸ್ವಲ್ಪ ನೀರಿನಲ್ಲಿ ಕದಡಿ ಅಗಾರ್ ಅಗಾರ್ ಮೇಲೆ ಸುರಿದು ಹರಡುವುದು. ಮಾಪನ ಮಾಡಬೇಕಾದ ವಸ್ತುವನ್ನು ವರ್ತುಳಾಕಾರದ ಕಾಗದದ ಚೂರುಗಳಲ್ಲಿ ಹೀರಿ ಅಗಾರ್ ಅಗಾರ್ ಮೆದೀಲೆ ಇಡುವುದು. ಇದನ್ನು 370ಅ ಉಷ್ಣತೆಯಲ್ಲಿ 48 ಗಂಟೆಗಳ ಕಾಲ ಇಟ್ಟ ಬಳಿಕ ಅಣುಜೀವಿಯ ಬೆಳೆವಣಿಗೆಯನ್ನು ಗಮನಿಸಿದರೆ ಕಾಗದ ಸುತ್ತಲೂ ವರ್ತುಳಾಕಾರದಲ್ಲಿ ಸ್ವಲ್ಪದೂರ ಸ್ವಚ್ಚವಾಗಿದ್ದು ಅನಂತರ ಅಣುಜೀವಿಯ ದಟ್ಟವಾದ ಬೆಳೆವಣಿಗೆ ಕಾಣುವುದು. ವರ್ತುಳಾಕಾರದ ಸ್ವಚ್ಚವಾದ ಪ್ರದೇಶದ ವ್ಯಾಸ ಆರೋಹಣಕ್ರಮದಲ್ಲಿ ಪ್ರತಿಜೀವಕದ ಪ್ರಮಾಣವನ್ನು ಅನುಸರಿಸುತ್ತದೆ. ಮೇಲೆ ಹೇಳಿದ ರೀತಿಯಲ್ಲಿ ವ್ಯಾಸ ಮತ್ತು ಪ್ರಮಾಣದ ಸಂಬಂಧವನ್ನು ಗ್ರಾಫ್ ಮೂಲಕ ರಚಿಸಬಹುದು.

ಇಲ್ಲಿ ತಿಳಿಸಿರುವ ಪದ್ಧತಿಗಳು ಅತಿ ರೂಢಿಯಲ್ಲಿರುವ ಕ್ರಮಗಳು. ಇವುಗಳಲ್ಲಿ ನಾನಾ ರೀತಿಯ ವೈವಿಧ್ಯಗಳು ಆಚರಣೆಯಲ್ಲಿರುವುದುಂಟು. ಆದರೂ ಇಲ್ಲಿ ವಿವರಿಸಿರುವ ಕ್ರಮಗಳೇ ಎಲ್ಲ ಪದ್ಧತಿಗಳಿಗೂ ಮೂಲ
(ವಿ.ಎಸ್.ಎಂ.ಯು.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ